"ಭೂಮಿಯ ಮೇಲಿನ ಪ್ರತಿಯೊಂದು ವಸ್ತುವೂ ಸಕ್ಕರೆ ಮರಳುಗಳ ಮಿಶ್ರಣವೇ. ಬುದ್ದಿಶಾಲಿಯಾದ ಇರುವೆಯಂತೆ ಸಕ್ಕರೆಯನ್ನು ಮಾತ್ರ ಗ್ರಹಿಸಿ ಮರಳು ಕಣಗಳನ್ನು ಬಿಟ್ಟುಬಿಡಬೇಕು." — ಮಹಾವತಾರ ಬಾಬಾಜಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Free Website Templates

Tuesday, November 1, 2011

ಮ್ಯುಚ್ಯುವಲ್ ಫಂಡ್

ಮ್ಯುಚ್ಯುವಲ್ ಫಂಡ್ ಗಳಿಂದ ಲಾಭಗಳಿಕೆ

ಸರಳ ಹಾಗೂ ಅರ್ಥವಾಗಲು ಸುಲಭವಾದ ಮಾರ್ಗದರ್ಶಿ


(ಎಸ್ ಬಿ ಐ ಮ್ಯುಚ್ಯುವಲ್ ಫಂಡ್ ತಂದಿರುವ ವಿನಿಯೋಜಕರಿಗಾಗಿ ಒಂದು ಶೈಕ್ಷಣಿಕ ಪ್ರಯಾಸ)

ಎಸ್ ಬಿ ಐ ಮ್ಯುಚ್ಯುವಲ್ ಫಂಡ್ ನ ಆಡಳಿತ, ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜಗತ್ತಿನ ಅಗ್ರಣಿ ಫಂಡ್ ಮ್ಯಾನೇಜ್ಮೆಂಟ್ ಕಂಪನಿಗಳಲ್ಲಿ ಒಂದಾಗಿರುವ ಸೊಸೈಟಿ ಜನರಲ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ (ಫ್ರಾನ್ಸ್) ಇವರ ಜಂಟಿ ಉಧ್ಯಮವಾಗಿದೆ. ಫಂಡ್ ಮ್ಯಾನೇಜ್ಮೆಂಟ್ನಲ್ಲಿ ಸುಮಾರು 20 ವರ್ಷಗಳಿಗೂ ಮೀರಿದ ಅಪಾರ ಅನುಭವದೊಂದಿಗೆ ಎಸ್ ಬಿ ಐ ಫಂಡ್ಸ್ ಮ್ಯಾನೇಜ್ಮೆಂಟ್ ಪ್ರೈ. ಲಿ. 46 ಲಕ್ಷಕ್ಕೂ ಮೀರಿ ವಿನಿಯೋಜಕರನ್ನು ನಿರ್ವಹಿಸುತ್ತಿರುವ ಭಾರತದ ಅತಿ ದೊಡ್ಡ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳಲ್ಲಿ ಒಂದಾಗಿದೆ. ದೇಶಾದ್ಯಂತ ಹರಡಿರುವ ನಮ್ಮ 130 ಕ್ಕೂ ಹೆಚ್ಚು ಸ್ವೀಕಾರ ಸ್ಥಳಗಳೊಂದಿಗೆ ನಮ್ಮ ವಿನಿಯೋಜಕರ ವಿಶಾಲ ಪರಿವಾರ ಶರವೇಗದಿಂದ ವಿಸ್ತರಿಸುತ್ತಲಿದೆ.

ಎಸ್ ಬಿ ಐ ಮ್ಯುಚ್ಯುವಲ್ ಫಂಡ್ ಪ್ರತಿಷ್ಟಿತ CNBC TV 18 ಕ್ರೈಸಿಲ್ ಮ್ಯುಚ್ಯುವಲ್ ಫಂಡ್ ಆಫ್ ದ ಇಯರ್ ಅವಾರ್ಡ್ 2007 ಗಳಿಸಿದೆ ಮಾತ್ರವಲ್ಲ ಸಂಗದ ಸ್ಕೀಮ್ಗಳ ಕಾರ್ಯದಕ್ಷತೆಗಾಗಿಯೂ ಐದು ಅವಾರ್ಡಗಳನ್ನು ಗಳಿಸಿದೆ. ಎಸ್ ಬಿ ಐ ಮ್ಯುಚ್ಯುವಲ್ ಫಂಡ್, CNBC ಅವಾಜ್ ಕನ್ಸೂಮರ್ ಅವಾರ್ಡ್ಸ್ 2006 ಮತ್ತು 2007 ರಲ್ಲಿ ಮೋಸ್ಟ್ ಪ್ರಿಫರ್ಡ್ ಬ್ರಾಂಡ್ ಆಫ್ ಮ್ಯುಚ್ಯುವಲ್ ಫಂಡ್ ಉಪಾದಿಯನ್ನೂ ಗೆದ್ದಿದೆ.

ಎಲ್ಲಕ್ಕೂ ಮಿಗಿಲಾಗಿ, 46 ಲಕ್ಷ ವಿನಿಯೋಜಕರ ವಿಶ್ವಾಸವೇ ದೈನಂದಿನ ಅವಿಷ್ಕಾರಿ ಹಾಗೂ ಸ್ಥಿರವಾದ ವಿನಿಯೋಜನಾ ಸೇವೆಗಳನ್ನು ಒದಗಿಸುತ್ತಿರಲು ನಮ್ಮನ್ನು ಪ್ರೇರೇಪಿಸುತ್ತಿದೆ. ಈ ನಿಮ್ಮ ವಿಶ್ವಾಸವೇ ನಿಮ್ಮಂಥ ವಿನಿಯೋಜಕರು ತಮ್ಮ ಆರ್ಥಿಕ ಲಕ್ಷ್ಯಗಳನ್ನು ಸಾಧಿಸಲು ಸಹಾಯ ಮಾಡಬಲ್ಲ ಉತ್ಪನ್ನಗಳ ವಿಕಾಸಗೊಳಿಸಲು ಮತ್ತು ನಿಮಗೆ ಒದಗಿಸಲು ನಮ್ಮ ವಿನಿಯೋಜನಾ ತಜ್ಞರ ಟೀಮನ್ನು ಹುರಿದುಂಬಿಸುತ್ತಿದೆ.

(ಮುಂದುವರೆಯುತ್ತದೆ)

Monday, April 4, 2011

ಹೊಸ ವರುಷಕೆ ಹೊಸತಾಗಿ


· ಹೊಸ ವರುಷವು ಶುಭ್ರವಾದ ಪುಟಗಳಿರುವ ಖಾಲಿ ಪುಸ್ತಕದಂತೆ. ವರ್ಷದ ಕೊನೆಯಲ್ಲಿ ಹಿಂತಿರುಗಿ ನೋಡಿದಾಗ ವಿಷಾದವಿಲ್ಲದೇ ಹರುಷವ ನೀಡುವ ರೀತಿಯಲ್ಲಿ ಅದರ ಪ್ರತಿ ಪುಟಗಳನ್ನೂ ತುಂಬಿಸೋಣ.

· ಹೊಸ ಆರಂಭ ಹೊಸ ವರ್ಷದಲ್ಲಿ ಮಾತ್ರವಲ್ಲ, ಪ್ರತಿ ಮುಂಜಾವಿನಲ್ಲೂ ಆಗುತ್ತದೆ. ಹೊಸತಾದ ಮತ್ತು ಸರಿಯಾದ ರೀತಿಯಲ್ಲಿ ಪ್ರಾರಂಭಿಸಲು ಅವಕಾಶವೀಯುತ್ತದೆ.

· ಹೊಸ ವರ್ಷದಲ್ಲಿ ಹಿಂದಿನದನ್ನು ಅರ್ಥವಂತಿಕೆಯಿಂದ, ಮುಂದಿನದನ್ನು ವಿಶ್ವಾಸದಿಂದ ಹಾಗೂ ಸುತ್ತಲೂ ಪ್ರೀತಿಯಿಂದ ನೋಡೋಣ.

· ನಾವು ನಮ್ಮ ಜೀವನವನ್ನು ಪ್ರತಿ ವರುಷ, ಪ್ರತಿ ದಿನ, ಪ್ರತಿ ಕ್ಷಣ ರುಪಿಸಿಕೊಳ್ಳುತ್ತೇವೆ. ನಮ್ಮ ಜೀವನ ಯಾವ ರೂಪ ಪಡೆಯುತ್ತದೆ ಎಂದು ತಿಳಿಯಲು ಹೊಸ ವರುಷ ಸರಿಯಾದ ಸಮಯ.

· ನಮ್ಮ ಜೀವನವನ್ನೊಮ್ಮೆ ಪುನರಾವಲೋಕಿಸಿದಾಗ ನಿಸ್ವಾರ್ಥ ಪ್ರೇಮದಿಂದ ಮಾಡಿದ ಕೆಲಸಗಳೇ ನಮಗೆ ಸಾರ್ಥಕ ಭಾವನೆ ನೀಡುವುದೆಂದು ತಿಳಿಯುತ್ತದೆ.

· ನಾವು ಕಳೆದುಹೋದ ಕಾಲಕ್ಕೇ ಜೋತುಬಿದ್ದಿರಬೇಕೆಂದಿಲ್ಲ. ಅದು ಕಳೆದ ವರುಷವಿರಲೀ ಅಥವಾ ನೆನ್ನೆಯಷ್ಟೇ ಆಗಿರಲಿ. ಈ ದಿನ ಹೊಚ್ಚ ಹೊಸತು, ಒಂದು ಹೊಸ ಅವಕಾಶ. ಹೊಸ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸರಿಯಾದ ಸಮಯ.

· ನಮ್ಮನ್ನು ಬದಲಿಸಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲವೆಂದಾದಲ್ಲಿ, ನಮ್ಮಲ್ಲಿರುವ ದೈವತ್ವಕ್ಕೆ ಖಂಡಿತಾ ಸಾಧ್ಯವಿದೆ. ಆ ದೈವತ್ವವನ್ನು ಜಾಗೃತಗೊಳಿಸೋಣ.

· ಹೊಸ ವರುಷ ಭವಿಷ್ಯದತ್ತ ನೋಡುವ ಸಮಯವಷ್ಟೇ ಅಲ್ಲ, ಭವಿಷ್ಯವೇ ಇಲ್ಲಿದೆ ಎಂದು ತಿಳಿಯುವ ಸಮಯ.

· ಹೊಸ ವರುಷ ನಮಗೇನು ತರುವುದೆನ್ನುವುದು ಹೊಸ ವರುಷಕ್ಕೆ ನಾವೇನು ತರುತ್ತೇವೆನ್ನುವುದನ್ನು ಅವಲಂಬಿಸಿರುತ್ತದೆ.

· ಹಳೆಯದನ್ನು ಕೈ ಬಿಟ್ಟು ಭವಿಷ್ಯದ ದಾರಿಯಲ್ಲಿ ದೃಡತೆ ಮತ್ತು ವಿಶ್ವಾಸದಿಂದ ಹೆಜ್ಜೆ ಹಾಕೋಣ.

- ಸಂಗ್ರಹಾನುವಾದ

ಎಲ್ಲರಿಗೂ ಯುಗಾದಿಯ ಶುಭಾಶಯಗಳು

Tuesday, January 26, 2010

Paramahansa Yogananda & Sri Yukteshwar

ಸ್ವತಂತ್ರ ಭಾರತದೊಲ್ಲೊಂದು ಆತಂಕಕಾರಿ ಕ್ಷಣ



ಸತ್ಯ ಅಹಿಂಸೆಯ ಹಾದಿಯಲ್ಲಿ ಹೋರಾಡಿ ಪರಕೀಯ ಅಳ್ವಿಕೆಯಿಂದ ಬಿಡುಗಡೆ ಹೊಂದಿ ವಿಷ್ವ ಸಮುದಾಯದಲ್ಲಿ ಜವಾಬ್ದಾರಿಯುತ ರಾಷ್ಟ್ರವಾಗಿ ಭಾರತ ಸ್ಥಾನಮಾನ ಪಡೆದಿದೆ. ಸ್ವತಂತ್ರ ಬಂದ ಹೊಸತರಲ್ಲೇ ನಡೆದ ಈ ಘಟನೆ ನಂಬಲಸಾಧ್ಯವಾದರೂ ಸತ್ಯ.

ಸೆಪ್ಟೆಂಬರ್ ೬,೧೯೪೭ ರಂದು ನವದೆಹಲಿಯಲ್ಲಿ ನಡೆದ ಈ ಗುಪ್ತ ಸಭೆ ಮುಂದಿನ ಕಾಲು ಶತಮಾನದ ಕಾಲ ಗುಟ್ಟಾಗಿರದಿದ್ದರೆ ಮುಂದೆ ಜಗತ್ತಿನ ಪ್ರಮುಖ ರಾಜಕೀಯ ಮುತ್ಸದ್ದಿಯಾಗಿ ಮೆರೆದ ಪಂಡಿತ್ ಜವಹರಲಾಲ್ ನೆಹರುರವರ ಭವಿಷ್ಯ ಏನಾಗಿರುತ್ತಿತ್ತೆಂದು ಹೇಳಲು ಕಷ್ಟಕರ.ಕೊಠಡಿಯಲ್ಲಿದ್ದವರು ಮೂರು ಮಂದಿ.ಹಿಂದಿನ ದಿನವಷ್ಟೇ ಸಿಮ್ಲಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ತುರ್ತು ಕರೆಯ ಮೇರೆಗೆ ದೆಹಲಿಗೆ ಹಿಂತಿರುಗಿದ ಲೂಯಿಸ್ ಮೌಂಟ್ ಬ್ಯಾಟನ್, ಪ್ರಧಾನಿ ಜವಹರಲಾಲ್ ನೆಹರು ಮತ್ತು ಉಪ ಪ್ರಧಾನಿ ವಲ್ಲಭಾಯಿ ಪಟೇಲ್. ಭಾರತೀಯ ನಾಯಕರ ಮುಖದಲ್ಲಿ ಹತಾಶ ಭಾವನೆ ಎದ್ದು ಕಾಣುತ್ತಿತ್ತು. ದೇಶದ ವಿಭಜನೆಯಿಂದುಂಟಾದ ಹಿಂಸೆ ಭುಗಿಲೆದ್ದು ಪಂಜಾಬಿನಲ್ಲಿ ತನ್ನ ಭೀಕರ ಪರಿಣಾಮ ಭೀರಿ ಇದೀಗ ದೆಹಲಿಯತ್ತ ತನ್ನ ಕೆನ್ನಾಲಿಗೆಯನ್ನು ಚಾಚುತ್ತಿತ್ತು. ಪರಿಸ್ಥಿತಿಯನ್ನು ಕೂಡಲೆ ನಿಯಂತ್ರಿಸದೆ ಹೋದಲ್ಲಿ ದೇಶ ಹಿಂಸೆಯ ದಳ್ಳುರಿಯಲ್ಲಿ ಉರಿದು ನಾಶವಾಗುವುದು ನಿಶ್ಚಿತವಾಗಿತ್ತು.


ನೆಹರು ಮೌಂಟ್ ಬ್ಯಾಟನ್ನರಿಗೆ ಪರಿಸ್ಥಿತಿಯನ್ನು ವಿವರಿಸುತ್ತಾ ತಮ್ಮಿಂದ ಇದರ ಹತೋಟಿ ಅಸಾಧ್ಯವೆಂದೂ ಕಾನೂನು ಮತ್ತು ವ್ಯವಸ್ಥೆಯನ್ನು ಸರಿಪಡಿಸಲು ನೀವೇ ಸಮರ್ಥರು, ದಯಮಾಡಿ ಸರ್ಕಾರವನ್ನು ನಡೆಸುವ ಜವಾಬ್ಧಾರಿಯನ್ನು ನೀವೇ ವಹಿಸಿಕೊಳ್ಳಿ ಎಂದು ಕೋರಿದರು. ಮೌಂಟ್ ಬ್ಯಾಟನ್ ಈ ಕೋರಿಕೆಯಿಂದ ದಿಗ್ಭ್ರಮೆಗೊಂಡು ಈಗಷ್ಟೇ ಗಳಿಸಿದ ಅಧಿಕಾರವನ್ನು ಇಷ್ಟು ಸುಲಭವಾಗಿ ಹಿಂತಿರಿಗಿಸುವುದು ಹಾಸ್ಯಾಸ್ಪದವಾದುದೆಂದೂ ಈ ವಿಷಯ ಬಹಿರಂಗವಾದರೆ ನಿಮ್ಮ ರಾಜಕೀಯ ಜೀವನಕ್ಕೇ ಅಪಾಯವೆಂದೂ ಹೇಳುತ್ತಾ ಅವರ ಕೋರಿಕೆಯನ್ನು ತಿರಸ್ಕರಿಸಿದರು.
ದೇಶದ ಹಿತದ ಮುಂದೆ ತಮ್ಮ ರಾಜಕೀಯ ಭವಿಷ್ಯ ಅಥವಾ ಪ್ರತಿಷ್ಠೆ ನೆಹರೂರವರಿಗೆ ಹೆಚ್ಚೆನಿಸಲಿಲ್ಲ. ತಮ್ಮ ಅಮೂಲ್ಯವಾದ ವರ್ಷಗಳು ಬ್ರಿಟೀಷ್ ಸೆರೆಮನೆಯಲ್ಲಿ ಕಳೆದುದರಿಂದ ತಮಗೆ ಇಂತಹ ಪರಿಸ್ಥಿತಿಯಲ್ಲಿ ಅಧಿಕಾರ ನಡೆಸುವ ಅನುಭವವಿಲ್ಲ. ಭಾರತವನ್ನು ವಿಭಜಿಸಿ ಅದು ಹೊತ್ತಿ ಉರಿಯುವಾಗ ತಾವು ನಿರ್ಲಿಪ್ತವಾಗಿರಲಾಗದು.ತಮ್ಮ ಎರಡನೆಯ ಮಹಾಯುದ್ಧದ ಅದ್ಭುತ ಮತ್ತು ಯಶಸ್ವೀ ಕಾರ್ಯಾಚರಣೆಯ ಅನುಭವದ ಅಗತ್ಯ ಸಧ್ಯದ ಪರಿಸ್ಥಿತಿಯಲ್ಲಿ ಅತ್ಯಾವಶ್ಯಕವೆಂದು ನೆಹರು ವಾದಿಸಿದರು. ಪಟೇಲರೂ ಅದಕ್ಕೆ ದನಿಗೂಡಿಸುತ್ತಾ ತಕ್ಷಣವೇ ಸರ್ಕಾರ ನಡೆಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂದರು.
ಮೌಂಟ್ ಬ್ಯಾಟನ್ ಒಂದು ಕ್ಷಣ ಯೋಚಿಸಿದರು. ಸವಾಲುಗಳನ್ನು ಇಷ್ಟಪಡುವ ಅವರ ಸ್ವಭಾವಕ್ಕೆ ಇದೊಂದು ದುರ್ಗಮವಾದ ಸವಾಲಿನಂತೆ ಕಂಡಿತು. ನೆಹರೂರವರೆಡೆಗಿನ ಅವರ ವೈಯಕ್ತಿಕ ಅಭಿಮಾನ, ಭಾರತದ ಬಗೆಗಿನ ಅವರ ಪ್ರೀತಿ ಮತ್ತು ತಮ್ಮ ಜವಾಬ್ದಾರಿ ಪ್ರಜ್ಞೆಗಳಿಂದಾಗಿ ಅವರಿಗೆ ತಪ್ಪಿಸಿಕೊಳ್ಳುವ ಹಾದಿಯೇ ಇರಲಿಲ್ಲ.
"ಸರಿ, ನಾನು ಇದನ್ನು ಮಾಡುತ್ತೇನೆ. ಇದನ್ನು ಹೇಗೆ ನಿಭಾಯಿಸಬೇಕೆಂಬುದು ನನಗೆ ಗೊತ್ತು. ಆದರೆ ಈ ಏರ್ಪಾಟು ಗುಟ್ಟಾಗಿರಬೇಕು." ಎಂದು ತಮ್ಮ ಯೋಜನೆಯನ್ನು ಚಕಚಕನೆ ಹೇಳುತ್ತಾ
ಹೇಳುತ್ತಾ ಹೋದರು."ನೀವಿಬ್ಬರೂ ನನ್ನನ್ನು ಸಂಪುಟ ಸಭೆಯ ತುರ್ತು ಸಮಿತಿಯನ್ನು ರಚಿಸಲು ಕೋರಿ ಅದರ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವಂತೆ ಆಹ್ವಾನಿಸಬೇಕು.ಸದಸ್ಯರನ್ನು ನಾನು ಮಾತ್ರ ನೇಮಕ ಮಾಡುತ್ತೇನೆ.ನಾಗರಿಕ ವಿಮಾನಯಾನದ ನಿರ್ದೇಶಕ,ರೈಲ್ವೆಯ ನಿರ್ದೇಶಕ,ಭಾರತ ಆರೋಗ್ಯ ಸೇವೆಯ ಮುಖ್ಯಸ್ಥರು ಸಮಿತಿಯಲ್ಲಿರಬೇಕು.ಸ್ವಯಂಸೇವಾ ಮತ್ತು ರೆಡ್ ಕ್ರಾಸ್ ಸಂಸ್ಥೆಗಳ ಮುಖಂಡತ್ವವನ್ನು ನನ್ನ ಮಡದಿ ವಹಿಸಬೇಕು.ಸಮಿತಿಯ ಕಾರ್ಯದರ್ಶಿಯಾಗಿ ಜನರಲ್ ಎರ್ಸ್ಕಿನ್ ಕ್ರಂ ಇರಲಿ.ಸಭೆಯ ನಡೆವಳಿಕೆಗಳನ್ನು ಕ್ಷಿಪ್ರವಾಗಿ ಟೈಪ್ ಮಾಡಲು ಬ್ರಿಟಿಷ್ ಟೈಪಿಸ್ಟ್ ಗಳಿರುತ್ತಾರೆ. ಈ ಸಭೆಗಳಲ್ಲಿ ಪ್ರಧಾನಿ ನನ್ನ ಬಲಕ್ಕೆ ಹಾಗೂ ಉಪ ಪ್ರಧಾನಿ ನನ್ನ ಎಡಕ್ಕೆ ಕುಳಿತು ನಾನು'ಹೀಗೆ ಮಾಡಬೇಕಲ್ಲವೇ?' ಎಂದಾಗ ನೀವು 'ಸರಿ ಹಾಗೇ ಮಾಡಿ' ಎನ್ನಬೇಕು. ಅನಗತ್ಯ ಮಾತುಗಳಿಗೆ ಈಗ ಸಮಯವಿಲ್ಲ." ಮೌಂಟ್ ಬ್ಯಾಟನ್ ರ ಮನಸ್ಸಿನ ಚುರುಕು ಗತಿಯನ್ನು ನೋಡಿ ದಂಗಾದ ಇಬ್ಬರೂ "ಸರಿ ಹಾಗೇ ಮಾಡೋಣ "ಎಂದರು.ಮತ್ತೆ ಹದಿನೈದು ನಿಮಿಷ ಚರ್ಚೆಯ ನಂತರ ಸಂಜೆ ಐದು ಘಂಟೆಗೆ ಮೊದಲ ಸಭೆ ಶುರುವಾಗಬೇಕೆಂದು ಮೌಂಟ್ ಬ್ಯಾಟನ್ ಹೇಳುವುದರೊಂದಿಗೆ ಸಭೆ ಮುಕ್ತಾಯಗೊಂಡಿತು.
ದಶಕಗಳ ಹೋರಾಟ,ಮುಷ್ಕರ,ಚಳುವಳಿ,ವಿದೇಶಿ ಬಟ್ಟೆ ಸುಡುವುದು,ಎಲ್ಲಕ್ಕೂ ಮಿಗಿಲಾಗಿ ಸ್ವತಂತ್ರ ಬಂದ ಕೇವಲ ಮೂರು ವಾರದ ನಂತರ ಕಟ್ಟಕಡೆಗೊಮ್ಮೆ ಭಾರತ ಒಬ್ಬ ಆಂಗ್ಲನೊಬ್ಬನಿಂದ ಆಳಲ್ಪಟ್ಟಿತು.


ಅದೇ ದಿನ ಕಲ್ಕತ್ತೆಯಲ್ಲೊಂದು ಸಾರ್ವಜನಿಕ ಸಮಾರಂಭದಲ್ಲಿ ಗಾಂಧೀಜಿಯವರಿಗೆ ನಗರದಲ್ಲಿ ನಡೆಯುತ್ತಿದ್ದ ಭೀಕರ ಕೋಮು ಗಲಭೆಯನ್ನು ಪವಾಡ ಸದೃಶವಾಗಿ ನಿಲ್ಲಿಸಿದ್ದಕ್ಕಾಗಿ
ಕಲ್ಕತ್ತೆಯ ಜನತೆ ಕೃತಜ್ಞತೆ ಸಲ್ಲಿಸುತ್ತಾ ಕೋಮು ಸೌಹಾರ್ದ ಕಾಪಾಡಿಕೊಂಡು ಬರುವುದಾಗಿ ವಚನವಿತ್ತರು.ಮಾರನೇ ದಿನವೇ ಮೌಂಟ್ ಬ್ಯಾಟನ್ ರ ಈ "One man boundary force" (ಏಕ ವ್ಯಕ್ತಿ ಗಡಿ ಪಡೆ) ದೆಹಲಿಯತ್ತ ಹೊರಟಿತು.ಹುಚ್ಚು ಆವೇಗದಲ್ಲಿ ವರ್ತಿಸುತ್ತಿದ್ದ ಜನರನ್ನು ಹತೋಟಿಗೆ ತರಲು ಈ ಮಹಾನ್ ವ್ಯಕ್ತಿಗಳ ನಿಸ್ವಾರ್ಥ ಹಾಗೂ ತ್ಯಾಗಮಯ ಜೀವನ ನಮಗೆಂದೆಂದೂ ಆದರ್ಶವಾಗಿರಲಿ.

ಬೇಂದ್ರೆ ನೆನಪು





ಪ್ರತಿ ಯುಗಾದಿಯಂದು ರೇಡಿಯೋ ಅಥವಾ ದೂರದರ್ಶನದಲ್ಲಿ ತಪ್ಪದೆ ಪ್ರಸಾರವಾಗುವ ಗೀತೆ ಬೇಂದ್ರೆಯವರ "ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ". ಒಂದು ರೀತಿಯಲ್ಲಿ ಬೇವು ಬೆಲ್ಲದಂತೆ ಈ ಗೀತೆಯೂ ಹಬ್ಬದ ಅವಿಭಾಜ್ಯ ಅಂಗವಾಗಿದೆ.

ಬೇಂದ್ರೆಯವರು ಈ ಪ್ರಸಿದ್ಧ ಗೀತೆಯಲ್ಲದೆ ಯುಗಾದಿಯ ಬಗ್ಗೆ ಇನ್ನೂ ಒಂದು ಗೀತೆಯನ್ನು ರಚಿಸಿದ್ದಾರೆ. ಅದರ ಮೊದಲ ಸಾಲುಗಳು ಇಂತಿವೆ:
ಅವರವರಿಗೆ ಅವರ ಹಾದಿ
ಅವರ ಹಾದಿ
ನನಗೆ ನಿನಗೆ ಒಂದೇ ಆದಿ
ಒಂದೇ ದಾದಿ
ಯುಗದ ಮಧ್ಯೆ ಬಿಂದು ಒಂದೂ
ಯುಗದ ಮಧ್ಯೆ ಬಿಂದು ಒಂದೂ
ಬೇಂದ್ರೆಯವರ ಇಂಥಹ ಸರಳವೆನಿಸುವ ಕವನಗಳಲ್ಲೇ ಜೀವನ ದರ್ಶನವಾಗುತ್ತದೆ. ಒಮ್ಮೆ ಬೇಂದ್ರೆಯವರ ಕಾವ್ಯದ ಬಗ್ಗೆ ಮಾತಾಡಲು ಬಂದವರಿಗೆ ವರಕವಿಯ ಕೆಲವು ಅಪರೂಪದ ಅಥವಾ ವಿಶಿಷ್ಟ ಕವನಗಳ ಬಗ್ಗೆ ಹೇಳಲು ಕೋರಲಾಯಿತು. ಅದಕ್ಕೆ ಉತ್ತರವಾಗಿ ಅವರು ಬೇಂದ್ರೆಯವರ ಪ್ರತಿ ಕವನವೂ ವಿಶಿಷ್ಟವೂ ಅಪರೂಪದ್ದೂ ಆದದ್ದು ಎಂದರು.
ಅವರ ವಿವಿಧ ಕವನಗಳ ಕೆಲವು ಸಾಲುಗಳು :
ಮೂಡಲ ಮನೆಯಾ ಮುತ್ತಿನ ನೀರಿನ ಎರಕಾವಾ ಹೊಯ್ದಾ
ನುಣ್ಣನೆ ಎರಕಾವಾ ಹೊಯ್ದಾ
ಬೆಳದಿಂಗ್ಳ ತು೦ಬಿತ್ತಾ ಅಂಗಳದ ತುಂಬಾ
ಅಂಗಳ ತುಂಬಿತ್ತಾ ಬೆಳದಿಂಗ್ಳಿನಿಂದಾ
ಇದರಾಗ ಅದು ಇತ್ತಾ , ಅದೆನೇ ಇದರೋಳಗಿತ್ತಾ
ಬೆಳದಿಂಗ್ಳ ತೊಂಬಿತ್ತಾ ಅಂಗಳದ ತುಂಬಾ
ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳೀಯಾಂವಾ
ವಾರದಾಗ ಮೂರು ಸರತಿ ಬಂದು ಹೊದಾ೦ವಾ
ಅವ್ವನ ಸೀರೆ ಮಾಡೀಚಲಾರೆ ಅಪ್ಪನ ರೊಕ್ಕಾ ಎಣೀಸಲಾರೆ
ಎಂತಾ ಪ್ರಕಾಶ ತುಂಬಿತು ಆಕಾಶಾ
ನನ ಕೈಯಾ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
ನಾನೂನು ನಕ್ಕೇನಾ ನಾನೂನು ನಕ್ಕೇನಾ
ಕುರುಡು ಕಾ೦ಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತು
ತುಂ ತುಂ ತುಂ ತುಂ
ತುಂ ತುಂ ತುಂ ತುಂ
ತುಂಬಿ ಬಂದಿತ್ತಾ
ತಂಗೀ ತುಂಬಿ ಬಂದಿತ್ತಾ
ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ
ಅವರ ಕವನಗಳನ್ನು ಸುಲಭವಾಗಿ ಹಾಡಬಹುದು. ಪಿ. ಕಾಳಿ೦ಗ ರಾವ್ , ಪಿ. ಬಿ. ಶ್ರೀನಿವಾಸ್ , ಯಶವ೦ತ ಹಳಬ೦ಡಿ, ಸ೦ಗೀತಾ ಕಟ್ಟಿ ಮು೦ತಾದವರು ಈ ಹಾಡುಗಳನ್ನು ಸುಮಧುರವಾಗಿ ಹಾಡಿ ಜನಪ್ರಿಯಗೊಳಿಸಿದ್ದಾರೆ. ಉತ್ತರ ಕರ್ಣಾಟಕದ ಜಾನಪದ ಶೈಲಿಯಲ್ಲಿ ಸ್ವತಃ ಬೇಂದ್ರೆಯವರೇ ಹಾಡಲು ಶುರು ಮಾಡಿದರೆ ಕೇಳುಗರು ಮಂತ್ರಮುಗ್ಧರಾಗುತ್ತಿದ್ದರ೦ತೆ.
ತಮ್ಮ ಕಾವ್ಯ ರಚನೆ , ಗಾಯನ , ಶಿಕ್ಷಣಗಳನ್ನು ಹೊರತುಪಡಿಸಿ ಅವರ ಆಸಕ್ತಿಗಳು ಹಲವಾರು. ಚೀನಿ ಭಾಷೆಯ ಕಲಿಕೆಯಿ೦ದ ಹಿಡಿದು ಸಂಖ್ಯಾರಹಸ್ಯ ಶಾಸ್ತ್ರದವರಗೆ. ಪದಗಳೊಡನೆ ಸರಸವನ್ನಾಡುತ್ತಾ ಕೇಳುಗರತ್ತ ಜ್ಞಾನ ಹಾಗೂ ಹಾಸ್ಯದ ಹೊಳೆಯನ್ನೇ ಹರಿಸುತ್ತಿದ್ದರು.
ಪದಗಳೊಡನೆ ಅವರ ಸರಸದ ಕೆಲವು ಮಾದರಿಗಳು :
ಇಳೆ ಮಳೆ ಬೇಕ೦ತದ , ಮಳೆ ಇಳೆ ಬೇಕಂತದ .
ಅವರ ಕವನದ ಶೀರ್ಷಿಕೆಯೊಂದು "ಬಾ ಹತ್ತರ" (ಹಿಂದಿಯಲ್ಲಿ ಎ೦ಬತ್ತೆರಡು ಎಂಬರ್ಥವೂ ಇದೆ )
ಬೆ೦ಗಳೂರಿನ ಬಳಿಯ Whitefield ಗೆ ಬ೦ದಾಗ ಸ್ಥಳದ ಹೆಸರನ್ನು ಕೇಳುತ್ತಲೇ "ಓ ಹೋ
"ಪಾಂಡುರ೦ಗ'" ಎ೦ದರು.
ಒಮ್ಮೆ ಎನ್ಕೆಯವರು ಬೇಂದ್ರೆಯವರನ್ನು ತಮ್ಮನ್ನು ತಮ್ಮ ಮನೆಯಿ೦ದ ಮಾರನೆಯ ದಿನ ಬೆಳಿಗ್ಗೆ ಏಳು ವರೆಗೆ ಬ೦ದು ಕರೆದೊಯ್ಯಲು ಕೇಳಿಕೊ೦ಡರು. ಆದರೆ ಆ ಸಮಯಕ್ಕೆ ಬ೦ದ ಬೇಂದ್ರೆಯವರಿಗೆ ಅವರಿನ್ನೂ ನಿದ್ರಿಸುತ್ತಿರುವುದಾಗಿ ತಿಳಿದುಬ೦ತು. ಒಡನೆಯೇ ತಮ್ಮ ಜೊತೆಯಲ್ಲಿದ್ದವರಿಗೆ "ನಮಗೆ ಏಳು ವರೆಗೆ ಬರಲಿಕ್ಕೆ ಹೇಳಿದ್ರು. ಈಗ ನಾವು ಅವ್ರು ಎಳೋವರೆಗೋ ಕಾಯಬೇಕು" ಎ೦ದರು.
ಒಮ್ಮೆ "ಪ್ರಪ೦ಚದಲ್ಲಿ ಮೊದಲು ಯಾವ ಭಾಷೆ ಹುಟ್ಟಿದ್ದು ?" ಎ೦ಬ ಪ್ರಶ್ನೆ ಬ೦ದಿತು. ಬೇ೦ದ್ರೆಯವರು ಒಮ್ಮೆಲೆ "ಕನ್ನಡ" ಎ೦ದರು. ಅದಕ್ಕೆ ವಿವರಣೆ ನೀಡುತ್ತಾ "ನಾವು ನೋಡುವುದು ಕಣ್ಣಿ೦ದ , ಕಣ್ಣೀರು ಹರಿಯುವುದು ಕೆನ್ನೆಯ ಮೇಲಿ೦ದ , ದುಡಿಯುವುದು ಕೈಯಿ೦ದ , ನಡೆಯುವುದು ಕಾಲಿ೦ದ ; ಎಲ್ಲ ಪದಗಳೂ ಕ ಎ೦ಬ ಅಕ್ಷರದಿಂದ ಮೊದಲಾಗುತ್ತದೆ, ಹೀಗಾಗಿ ಪ್ರಪ೦ಚದಲ್ಲಿ ಹುಟ್ಟಿದ ಮೊದಲ ಬಾಷೆ ಕನ್ನಡವೇ" ಎ೦ದರು.
ತಮ್ಮ ಸಮಯ ಸ್ಫೂರ್ತಿಯ ಮಾತುಗಳಿಂದ ಎಂತಹವರನ್ನೂ ಮೋಡಿ ಮಾಡುತ್ತಿದ್ದರು. ಧಾರವಾಡದಲ್ಲಿ ಅವರು ಕಟ್ಟಿಕೊಂಡ "ಗೆಳೆಯರ ಗು೦ಪಿ"ಗೆ ಅವರೇ ನಾಯಕರು. ಮನೆಯಲ್ಲಿ ಗೆಳೆಯರಿದ್ದರೆ ಮಾತಿನಲ್ಲಿ ಹೊತ್ತು ಹೋದದ್ದೇ ತಿಳಿಯುತ್ತಿರಲಿಲ್ಲ. ಆ ಸಂದರ್ಬಗಳಲ್ಲಿ ಅವರೊಂದಿಗಿರುತ್ತಿದ್ದ ಮಿತ್ರರ ಪ್ರಕಾರ ಅವರದು ಬತ್ತದ ಉತ್ಸಾಹ , ಕೊನೆಯಿಲ್ಲದ ಮಾತು. ಮಧ್ಯೆ ಆ ಪ್ರವಾಹಕ್ಕೆ ಯಾರೂ ಅಡ್ಡಿ ಬರಬಾರದು. ಅದೊಂದು ರೀತಿಯ ಏಕ ಮುಖ ಸಂಚಾರ ವ್ಯವಸ್ಥೆ. ಕೊನೆಗೆ ಸುಸ್ತಾಗಿ "ಸಾರ್ ನಿದ್ದೆ ಬರ್ತಾ ಇದೆ "ಎಂದರೆ "ಸರಿ , ನೀವು ಮಲಗಿ. ನಾನು ಸ್ವಲ್ಪ ಮಹಾರಾಜರ ಹತ್ತಿರ ಮಾತಾಡೋದಿದೆ" ಎನ್ನುವರು. ತಮ್ಮ ಆದ್ಯಾತ್ಮಿಕ ಗುರುಗಳೊಂದಿಗೆ ಅವರದು ಅಲೌಕಿಕವಾದ ಸಂಪರ್ಕ , ಸಂವಾದ. ಬೆಳಿಗ್ಗೆ ಎದ್ದು "ಏನ್ಸಾರ್ ಮಲಗಲಿಲ್ಲವೇ?"ಎಂದರೆ , "ಇಲ್ಲ , ಬೇಗ ಮುಖ ತೊಳೆದುಕೊಂಡು ಬಾ . ಮಹಾರಾಜರು ಏನೋ ಹೇಳ್ತಾ ಇದ್ದಾರೆ, ಬರ್ಕೋ " ಎನ್ನುವರು. ಅವರದು ಶ್ರಮ ಪಟ್ಟು ವ್ಯಾಸಂಗ ಮಾಡಿ ಬರೆದ ಕಾವ್ಯವಲ್ಲ. ತನ್ನಷ್ಟಕ್ಕೆ ತಾನೆ ಹುಕ್ಕಿ ಹರಿವ ಸ್ಫೂರ್ತಿಯ ಸೆಲೆ.
ಅವರ ಕಾವ್ಯದಲ್ಲಿ "ಕರಡಿಯ ಕುಣಿತ"ದಂತಹ ಶಿಶು ಗೀತೆಯಿಂದ "ಗಂಗಾವತರಣ" "ನಾಕು ತಂತಿ"ಯಂತಹ ವಿಮರ್ಶೆಗೂ ನಿಲುಕದ ಕವನಗಳಿವೆ. ಉಮರ್ ಖಯ್ಯಾಮನ ಕಾವ್ಯದಂತೆ ಅದು ಹಲವರಿಗೆ ಹಲವು ರೀತಿಯಲ್ಲಿ ತೋರಿದರೂ ಎಲ್ಲರೂ ಸವಿಯುವ ಕಾವ್ಯ ಅವರದಾಗಿತ್ತು. ವರಕವಿಯಾಗಿದ್ದರೂ ಎಲ್ಲರೊಡನೆ ಒಂದಾಗುವ
ವ್ಯಕ್ತಿತ್ವ ಅವರದು.
ಜ್ಞಾನಪೀಠ ಪ್ರಶಸ್ತಿ ಬಂದ ಹೊಸತರಲ್ಲಿ ಧಾರವಾಡದಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದಿಳಿದರು. ಎಂದಿನಂತೆ ಅವರನ್ನು ಬರಮಾಡಿಕೊಳ್ಳಲು ಅವರ ಕಿರಿಯ ಸ್ನೇಹಿತರೊಬ್ಬರು ಕಾದಿದ್ದರು. ಅದೇ ರೈಲಿನಲ್ಲಿ ಬಂದ ಆಗಿನ ಮುಖ್ಯ ಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯನವರು ಬೇಂದ್ರೆಯವರನ್ನು ನೋಡುತ್ತಲೇ "ನಮ್ಮಲ್ಲೇ ಉಳಿದುಕೊಳ್ಳಿ. ನೀವಿಲ್ಲಿರುವಷ್ಟು ಕಾಲ ಪ್ರತ್ಯೇಕ ಕೊಠಡಿ , ಕಾರು , ಚಾಲಕ ಎಲ್ಲವನ್ನು ಒದಗಿಸುತ್ತೇನೆ" ಎಂದರು. ಪೆಚ್ಚಾಗಿ ನಿಂತಿದ್ದ ತಮ್ಮ ಸ್ನೇಹಿತರನ್ನು ತೋರಿಸುತ್ತಾ "ಇ೦ವಾ ,'ಜ್ಞಾನಪೀಠ ಪ್ರಶಸ್ತಿ ಬಂದೊಡನೆ ಮುಖ್ಯ ಮಂತ್ರಿಯವರ ಜೊತೆಯಲ್ಲಿ ಹೋದರು' ಎನ್ನುವುದಿಲ್ಲವೇ" ಎನ್ನುತ್ತಾ ಅವರ ಆಮಂತ್ರಣವನ್ನು ನಯವಾಗಿ ನಿರಾಕರಿಸಿದರು. ಅವರೊಬ್ಬ ಸರಳ ಸಂಭಾವಿತ ಸ್ನೇಹಜೀವಿ. ಅವರ ಮಿತ್ರರ ಪ್ರಕಾರ ಅವರೊಬ್ಬ ಸ್ನೇಹಾವದೂತ.
ಬೇಂದ್ರೆ ಬದುಕಿನಲ್ಲಿ ಸಾಕಷ್ಟು ನೋವು ಅನುಭವಿಸಿದವರು. ಬದುಕಿನಲ್ಲಿ ಬೆಂದು ಬೇ೦ದ್ರೆಯಾದರು ಎನ್ನಲಾಗುತ್ತದೆ. ಬದುಕಿನಲ್ಲಿನ ಕತ್ತಲು ಮತ್ತು ಬೆಳಕನ್ನು ಮೀರಿ ಬೆಳೆದ ದಾರ್ಶನಿಕ ಕವಿ ಅವರಾಗಿದ್ದರು. ಸೂರ್ಯ ಮುಳುಗಿ ಕತ್ತಲಾಯಿತೆನ್ನುವವರಿಗೆ ಸ್ನೇಹಿತನಂತೆ ಪಕ್ಕದಲ್ಲಿ ಕುಳಿತು "ಬೆಳುದಿಂಗಳು ನೋಡಾ " ಎನ್ನುವರು. ಇಂತಹಾ ಜಗದ ಕವಿ , ಯುಗದ ಕವಿಯನ್ನು ಪಡೆದ ನಾವೇ ಭಾಗ್ಯಶಾಲಿಗಳು.
"ರಸವೇ ಜನನ ವಿರಸ ಮರಣ
ಸಮರಸವೇ ಜೀವನ "
-ಅಂಬಿಕಾತನಯ ದತ್ತ
(ದತ್ತಾತ್ರೇಯ ರಾಮಚಂದ್ರ ಬೇಂದ್ರೆ)

ಭಾರತದ ಜ್ಞಾನಾವತಾರ




ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿ
(೧೦ ಮೇ ೧೯೫೫- ಮಾರ್ಚ್ ೧೯೩೬)


ಇಂದು ಭಾರತದ ಜ್ಞಾನಾವತಾರವೆಂದು ಹೇಳಲಾದ ಸ್ವಾಮಿ ಶ್ರೀ ಯುಕ್ತೇಶ್ವರರ ಜಯಂತಿ. ಇವರ ಬಗ್ಗೆ ಬರೆಯಲು ಹೊರಟರೆ ದೊಡ್ಡ ಪುಸ್ತಕವೇ ಆಗುವುದು.
ಈ ಮಹಾತ್ಮರ ಬಗ್ಗೆ ತಿಳಿಯಬಯಸುವವರು ಪರಮಹಂಸ ಯೋಗಾನಂದರ "ಯೋಗಿಯ ಆತ್ಮ ಕಥೆ" (ಇಂಗ್ಲಿಷ್ ನಲ್ಲಿ "Autobiography of a Yogi" ಪುಸ್ತಕವನ್ನು ಓದಬಹುದು.
ಈ ಲೇಖನದಲ್ಲಿ ಅವರ ಬಗ್ಗೆ ಹೇಳಲಾದ ಕೆಲವು ಮಾತುಗಳನ್ನಷ್ಟೇ ಉಲ್ಲೇಖಿಸಿರುವೆ.
ಶ್ರೀಗಳು ಮೊದಲ ಬಾರಿಗೆ ತಮ್ಮ ಆಶ್ರಮಕ್ಕೆ ಬಂದ ತಮ್ಮ ಪ್ರಿಯ ಶಿಷ್ಯ ಪರಮಹಂಸ ಯೋಗಾನಂದರು ತಮ್ಮ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ " ನನ್ನ ವಂಶದ ಹೆಸರು ಪ್ರಿಯನಾಥ್ ಕರಾರ್. ಈ ಸಿರಾಂಪುರದಲ್ಲಿ ಹುಟ್ಟಿದೆ. ತಂದೆ ಶ್ರೀಮಂತ ವ್ಯಾಪಾರಿ. ಈಗ ನನ್ನ ಆಶ್ರಮವಾಗಿರುವ ಈ ಅನುವಂಶಿಕ ಭವನವನ್ನು ನನಗೆ ಬಿಟ್ಟು ಹೋದರು. ನನ್ನ ಸಾಂಪ್ರದಾಯಿಕವಾದ ಶಾಲಾಶಿಕ್ಷಣ ಬಹಳ ಕಡಿಮೆ. ನನ್ನ ಪಾಲಿಗೆ ಅದು ಮಂದಗತಿಯದೂ ಆಳವಿಲ್ಲದುದೂ ಆಗಿತ್ತು. ಯೌವನದ ಪ್ರಾರಂಭದಲ್ಲೇ ಗೃಹಸ್ಥನ ಹೊಣೆಗಾರಿಕೆಯನ್ನು ಹೊತ್ತೆ; ಒಬ್ಬಳು ಮಗಳಿದ್ದಾಳೆ, ಈಗ ಅವಳಿಗೆ ಮದುವೆಯಾಗಿದೆ. ನನ್ನ ನಡುಹರೆಯದ ಜೀವನ ವಾರಣಾಸಿಯ ಯೋಗಾವತಾರ ಶ್ರೀ ಲಾಹಿರಿ ಮಹಾಶಯರ ನೇತೃತ್ವದಿಂದ ಅನುಗ್ರಹೀತವಾಯಿತು. ನನ್ನ ಪತ್ನಿ ತೀರಿಕೊಂಡ ಮೇಲೆ ನಾನು ಸಂನ್ಯಾಸವನ್ನು ಸ್ವೀಕರಿಸಿದೆ. ಶ್ರೀ ಯುಕ್ತೇಶ್ವರ ಗಿರಿ ಎಂದು ನನಗೆ ಹೊಸ ನಾಮಕಾರಣವಾಯಿತು. ಇದೇ ನನ್ನ ಸರಳ ವೃತ್ತಾಂತ."
ಎಲ್ಲ ಜೀವನ ಚರಿತ್ರೆಗಳ ರೂಪರೇಷೆಗಳಂತೆಯೇ ಅವರ ಮಾತುಗಳು ಒಳಗಿನ ವ್ಯಕ್ತಿತ್ವವನ್ನು ತೋರದೆ ಹೊರಗಿನ ಸಂಗತಿಗಳನ್ನು ಮಾತ್ರ ಕೊಟ್ಟಿವೆ.
ಶ್ರೀ ಯುಕ್ತೇಶ್ವರರ ಮಹಾಸಮಾಧಿಯ ಸಂದರ್ಭದಲ್ಲಿ ಕೊಲ್ಕತಾದ ಪ್ರಮುಖ ದಿನಪತ್ರಿಕೆಯಾದ "ಅಮೃತ್ ಬಜಾರ್ ಪತ್ರಿಕಾ" ಅವರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಾ "ಭಗವದ್ಗೀತೆಯ ಸುಪ್ರಸಿದ್ದ ವ್ಯಾಖ್ಯಾನಕಾರರಲ್ಲಿ ಒಬ್ಬರಾದ ಸ್ವಾಮೀಜಿಯವರು ವಾರಣಾಸಿಯ ಯೋಗಿರಾಜ ಶ್ರೀ ಶ್ಯಾಮ ಚರಣ ಲಾಹಿರಿ ಮಹಾಶಯರ ಶಿಷ್ಯರು. ಭಾರತದಲ್ಲಿ ಹಲವು ಯೋಗದಾ ಸತ್ಸಂಗ ಕೇಂದ್ರಗಳ ಸ್ಥಾಪಕರೂ , ತಮ್ಮ ಪ್ರಮುಖ ಶಿಷ್ಯರೂ ಆದ ಪರಮಹಂಸ ಯೋಗಾನಂದರು ಪಶ್ಚಿಮಕ್ಕೆ ಒಯ್ದ ಯೌಗಿಕ ಕಾರ್ಯಚಟುವಟಿಕೆಗಳಿಗೆ ಹಿನ್ನೆಲೆಯಲ್ಲಿ ಮಹಾಪ್ರೇರಕ ಶಕ್ತಿಯಾಗಿದ್ದವರೂ ಸ್ವಾಮೀಜಿಯವರೇ. ಶ್ರೀ ಯುಕ್ತೇಶ್ವರರ ಭವಿಷ್ಯ ನಿರ್ಮಾಣಶಕ್ತಿ ಹಾಗೂ ಗಾಢವಾದ ಸಿದ್ಧಿಯೇ ಸ್ವಾಮಿ ಯೋಗಾನಂದರನ್ನು ಪ್ರೇರಿಸಿ ಸಮುದ್ರಗಳನ್ನು ದಾಟಿ ಹೋಗಿ ಅಮೇರಿಕಾದಲ್ಲಿ ಭಾರತದ ಸಂತರ ಸಂದೇಶವನ್ನು ಪ್ರಚುರಪಡಿಸುವಂತೆ ಮಾಡಿದುದು.
"ಭಗವದ್ಗೀತೆ ಮತ್ತಿತರ ಧರ್ಮಗ್ರಂಥಗಳ ಮೇಲೆ ಅವರು ಬರೆದಿರುವ ವ್ಯಾಖ್ಯಾನವನ್ನು ನೋಡಿದರೆ ಪೌರಾತ್ಯ ಹಾಗೂ ಪಾಶ್ಚ್ಯಾತ್ಯ ದರ್ಶನದ ಮೇಲೆ ಶ್ರೀ ಯುಕ್ತೇಶ್ವರರು ಎಂಥಹಾ ಗಾಢವಾದ ಅಧಿಕಾರವನ್ನು ಪಡೆದಿದ್ದರೆಂದು ಪ್ರಮಾಣಿತವಾಗುತ್ತದೆ. ಅಲ್ಲದೆ ಪೂರ್ವ ಪಶ್ಚಿಮಗಳನ್ನು ಬೆಸೆಯಲು ಬಯಸುವವರಿಗೆ ಇದು ಕಣ್ಣು ತೆರೆಸಿದಂತಾದೀತು. ಎಲ್ಲಾ ಧಾರ್ಮಿಕ ಪಂಥಗಳನ್ನು ಒಟ್ಟುಗೂಡಿಸಬೇಕೆಂದು ಬಯಸುತ್ತಿದ್ದುದರಿಂದ ಶ್ರೀ ಯುಕ್ತೇಶ್ವರರು ಧರ್ಮದಲ್ಲಿ ವೈಜ್ಞಾನಿಕ ಧೋರಣೆಯನ್ನು ಬೋಧಿಸಲು ಅನುಕೂಲವಾಗುವಂತೆ ಎಲ್ಲಾ ಪಂಥಗಳ ಮುಖ್ಯಸ್ಥರ ಸಹಕಾರವನ್ನು ಪಡೆದು 'ಸಾಧು ಸಭಾ 'ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ತಮ್ಮ ದೇಹತ್ಯಾಗದ ಸಮಯದಲ್ಲಿ ತಮ್ಮ ಸ್ಥಾನದಲ್ಲಿ ಪರಮಹಂಸ ಯೋಗಾನಂದರನ್ನು ಸಾಧು ಸಭೆಯ ಅಧ್ಯಕ್ಷರನ್ನಾಗಿ ನಾಮಕರಣ ಮಾಡಿದರು..."
ಈ ಮಹಾತ್ಮರ ಜೀವನದ ವಿವರಗಳು ಇಂಗ್ಲಿಷ್ ಬಾಷೆಯಲ್ಲಿರುವ ಈ ಕೊಂಡಿಯಲ್ಲಿ ಉಚಿತವಾಗಿ ಲಭ್ಯವಿದೆ
http://www.anandaindia.org/inspiration/books/ay/index.html

Thursday, January 14, 2010

ಮಹಾತ್ಮಾ ಗಾಂಧಿಯವರ ಜ್ಞಾಪಕಾರ್ಥ

ಹೇ ರಾಂ" ಎನ್ನುತ್ತಾ ರಾಮನೆಡೆ ಹೊರಟ "ರಾಮರಾಜ್ಯ"ದ ಕನಸು ಕಂಡ ಬಾಪು

"ನಿಜವಾದ ಅರ್ಥದಲ್ಲಿ ಆತ ಒಬ್ಬ ರಾಷ್ಟ್ರ ಪಿತನಾಗಿದ್ದ. ಒಬ್ಬ ಹುಚ್ಚ ಆತನನ್ನು ಕೊಂದ. ಜ್ಯೋತಿ ನಂದಿದುಕ್ಕಾಗಿ ಲಕ್ಷಾಂತರ ಜನ ದುಃಖಿಸುತ್ತಿದ್ದಾರೆ. ಈ ನಾಡಿನಲ್ಲಿ ಬೆಳಗಿದ ಜ್ಯೋತಿ ಸಾಧಾರಣ ಜ್ಯೋತಿಯಲ್ಲ. ಇನ್ನು ಸಹಸ್ರ ವರ್ಷಕಾಲ ಅದನ್ನು ಈ ನಾಡು, ಈ ವಿಶ್ವ ಕಾಣುತ್ತಿರುತ್ತದೆ "-1948 ರ ಜನವರಿ 30 ರಂದು ಹೊಸ ದಿಲ್ಲಿಯಲ್ಲಿ ಮಹಾತ್ಮಾ ಗಾಂಧಿಯವರ ಹತ್ಯೆಯಾದ ವೇಳೆಯಲ್ಲಿ ಪ್ರಧಾನಮಂತ್ರಿ ಜವಹರಲಾಲ ನೆಹರೂರವರು ಹೇಳಿದ ಮಾತು.

ಐದು ತಿಂಗಳ ಹಿಂದೆಯಷ್ಟೇ ಭಾರತ ಶಾಂತಿಯುತವಾಗಿ ತನ್ನ ಸ್ವಾತಂತ್ರ್ಯವನ್ನು ಗಳಿಸಿಕೊಂಡಿತ್ತು. 78 ವರ್ಷದ ಗಾಂಧೀಜಿಯ ಕಾರ್ಯ ಕೈಗೂಡಿತ್ತು. ತನ್ನ ಕಾಲ ಸಮೀಪಿಸಿತ್ತೆಂದು ಅವರಿಗೆ ತಿಳಿದಿತ್ತು. ಆ ದುರಂತ ನಡೆದ ದಿನ ಬೆಳಿಗ್ಗೆ ಅವರು ತಮ್ಮ ಮೊಮ್ಮಗಳಿಗೆ "ಅಭಾ, ಎಲ್ಲ ಮುಖ್ಯ ಪತ್ರಗಳನ್ನು ತಂದುಕೊಡು. ಎಲ್ಲಕ್ಕೂ ನಾನು ಇಂದೇ ಉತ್ತರ ಬೇರೆಯಬೇಕು. ನಾಳೆ ಸಾಧ್ಯವಾಗದಿರಬಹುದು." ಎಂದರು. ಅವರ ಬರವಣಿಗೆಗಳಲ್ಲಿ ಅನೇಕ ಕಡೆ ತಮ್ಮ ಅಂತಿಮ ವಿಧಿಯ ಬಗ್ಗೆ ಸೂಚನೆಗಳನ್ನು ಕೊಟ್ಟಿದ್ದಾರೆ.

ಉಪವಾಸದಿಂದ ಬಡಕಲಾಗಿ ಸವೆದುಹೋಗಿದ್ದ ಶರೀರಕ್ಕೆ ಮೂರು ಗುಂಡುಗಳು ಹೊಕ್ಕು ಆ ಮಹಾತ್ಮ ನೆಲಕ್ಕೆ ಒರಗುತ್ತಿದ್ದಂತೆ ತಮ್ಮ ಕೈಗಳನ್ನು ಮೇಲೆತ್ತಿ ಎಲ್ಲರಿಂದಲೂ ಬಿಳ್ಕೊಂಡು ಮೌನವಾಗಿ ತಮ್ಮ ಕ್ಷಮೆಯನ್ನು ಸೂಚಿಸಿದರು. ತಮ್ಮ ಬಾಳಿನ ಎಲ್ಲಾ ರೀತಿಗಳಲ್ಲಿಯೂ ಮುಗ್ಧ ಕಲೆಗಾರರಾಗಿದ್ದ ಗಾಂಧೀಜಿ ತಮ್ಮ ಮರಣದ ಸಮಯದಲ್ಲಿ ಮಹಾನ್ ಕಲೆಗಾರರಾಗಿ ಕಂಡರು. ತಮ್ಮ ನಿಸ್ವಾರ್ಥ ಜೀವನದ ಎಲ್ಲಾ ತ್ಯಾಗಗಳೂ ಆ ಅಂತಿಮ ಪ್ರೇಮ ಭಾವನೆಯನ್ನು ಸಾಧ್ಯವಾಗಿಸಿದವು.

"ಮುಂದಿನ ತಲೆಮಾರಿನವರು, ರಕ್ತ ಮಾಂಸಗಳಿಂದ ಕೂಡಿದ ಇಂಥಹ ವ್ಯಕ್ತಿಯೊಬ್ಬ ಈ ಭೂಮಿಯಲ್ಲಿ ಜನಿಸಿದನೆಂದು ನಂಬುವುದೇ ಕಷ್ಟವಾಗಬಹುದು" ಎಂದು ಆಲ್ಬರ್ಟ್ ಐನ್ಸ್ಟೈನ್ ಹೊಗಳಿ ಬರೆದರು.

"ಗಾಂದಿಯವರ ಹತ್ಯೆ ಇಲ್ಲಿ ಎಲ್ಲರಿಗೂ ಶೋಕವನ್ನುಂಟು ಮಾಡಿದೆ. ಸದ್ಗುಣ ಸಂಪನ್ನರಾದ ಕ್ರೈಸ್ತ ಧರ್ಮದೂತರಿಗೆ ನಡೆಸುವಂತೆ ಗಾಂಧಿಯವರಿಗೂ ಸಂತಾಪವನ್ನು ವ್ಯಕ್ತಪಡಿಸಲಾಯಿತು." ಎಂದು ರೋಮಿನ ಪೋಪ್ ಗುರುವಿನ ಪತ್ರ ಹೇಳಿತು.

ಒಂದು ನಿರ್ಧಿಷ್ಟ ಸತ್ಯವನ್ನು ಸಾಧಿಸಲು ಭೂಮಿಗಿಳಿದು ಬರುವ ಮಹಾನ್ ವ್ಯಕ್ತಿಗಳ ಜೀವನ ಸಾಂಕೇತಿಕ ಅರ್ಥದಿಂದ ಕೂಡಿರುತ್ತದೆ. ಭಾರತದ ಐಕ್ಯತೆಯನ್ನು ಸಾಧಿಸುವ ದಿಶೆಯಲ್ಲಿ ಗಾಂಧೀಜಿಯವರ ನಾಟಕ ಸದೃಶ ಮರಣವು ಅನೈಕ್ಯದಿಂದ ಹರಿದು ಹಂಚಿ ಹೋಗುತ್ತಿರುವ ಪ್ರಪಂಚದ ಎಲ್ಲಾ ಭೂಖಂಡಗಳಿಗೆ ಅವರ ಸಂದೇಶವನ್ನು ಪ್ರಮುಖವಾಗಿ ಎತ್ತಿ ತೋರಿಸಿದೆ. ಭವಿಷ್ಯವಾಣಿಯಲ್ಲಿ ಅವರ ಸಂದೇಶ ಹೀಗಿದೆ: "ಅಹಿಂಸೆ ಎಂಬುದು ಮಾನವರಲ್ಲಿ ಆಚರಣೆಗೆ ಬಂದಿದೆ. ಅದು ವಿಶ್ವ ಶಾಂತಿಯ ಅವಿರ್ಭಾವದ ಮುನ್ಸೂಚಕ."

-ಪರಮಹಂಸ ಯೋಗಾನಂದರ "ಯೋಗಿಯ ಆತ್ಮ ಕತೆ (Autobiography of a Yogi) "ಯಿಂದ ಉದ್ಧೃತ

Monday, May 5, 2008

ನನ್ನ ಮೆಚ್ಚಿನ ಪುಸ್ತಕ


ನನ್ನ ಮೆಚ್ಚಿನ ಪುಸ್ತಕ


ನಾನು ಓದಿದ ಹಲವಾರು ಪುಸ್ತಕಗಳ ಪೈಕಿ ನನ್ನ ಮೇಲೆ ಸತ್ಪರಿಣಾಮ ಬೀರಿದ್ದು ಶ್ರೀ ಪರಮಹಂಸ ಯೋಗಾನಂದರ "ಯೋಗಿಯ ಆತ್ಮಕತೆ". Autobiography of a Yogi ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ಈ ಪುಸ್ತಕ 60 ವರ್ಷಗಳ ನಂತರವೂ ವಿಶ್ವದಾದ್ಯಂತ ಪ್ರಸಿದ್ದವಾಗಿದೆ. ಬಹುತೇಕ ಎಲ್ಲಾ ಭಾರತೀಯ ಹಾಗು ವಿಷ್ವದ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿದೆ. ಪರಮಹಂಸ ಯೋಗಾನಂದರು ಒಬ್ಬ ಪ್ರಸಿದ್ದ ಯೋಗಿ. ಇದೊಂದು ಯೋಗಿಗಳ ಬಗ್ಗೆ ಒಬ್ಬ ಯೋಗಿಯೇ ಬರೆದ ಅಪರೂಪದ ಕೃತಿ. ತಾವು ಕಂಡು ಅನುಭವಿಸಿದ ಘಟನೆಗಳನ್ನು ಪ್ರಾಮಾಣಿಕವಾಗಿ ತಿಳಿ ಹಾಸ್ಯದೊಂದಿಗೆ ಹೇಳುತ್ತಾ ಓದುಗರನ್ನು ಯೋಗ ಮತ್ತು ಆಧ್ಯಾತ್ಮದ ವಿಷಯಗಳಿಗೆ ಪರಿಚಯಿಸುತ್ತಾರೆ.



ಎರಡು ದೇಹಗಳ ಸಂತ, ಗಾಳಿಯಲ್ಲಿ ತೇಲಾಡುವ ಸಂತ, ಪರಮಸುಖಿಯಾದ ಉಪಾಸಕ, ಗಂಧ ಬಾಬ, ಹುಲಿ ಸ್ವಾಮಿ, ನಿಧ್ರಿಸದ ಸಂತ, ನಿರಾಹಾರ ಯೋಗಿನಿ, ಆನಂದಮಯೀ ಮಾ ಮುಂತಾದವರೊಡನೆ ನಡೆದ ತಮ್ಮ ಭೇಟಿಯನ್ನು ವಿವರವಾಗಿ ತಿಳಿಸುತ್ತಾರೆ. ಕವಿ ರವೀಂದ್ರನಾಥ ಟ್ಯಾಗೋರ್, ಮಹಾತ್ಮಾ ಗಾಂಧಿ, ಜಗಧೀಶ್ ಚಂದ್ರ ಬೋಸ್ ರೊಂದಿಗಿನ ಭೇಟಿಯ ವಿವರಗಳು ಮಹತ್ವಪೂರ್ಣ. ಪವಾಡಗಳ ನಿಯಮಗಳು, ಭಾರತದ ಪ್ರಾಚೀನ ದೈವ ಸಾಕ್ಷಾತ್ಕಾರ ವಿಜ್ಞಾನವೆನಿಸಿದ ಕ್ರಿಯಾ ಯೋಗ, ಸಾವಿನಾಚೆಗಿನ ಬದುಕನ್ನು ಗತಿಸಿ ಸುಮಾರು ನಾಲ್ಕು ತಿಂಗಳ ಬಳಿಕ ಪುನರುಜ್ಜೀವನಗೊಂಡ ತಮ್ಮ ಪೂಜ್ಯ ಗುರು ಶ್ರೀ ಯುಕ್ತೇಶ್ವರರಿಂದ ದೊರಕಿದ ಅಪೂರ್ವವಾದ ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.


ಸಾವಿಲ್ಲದ ಚಿರಯವ್ವನದ ಗುರು ಶ್ರೀ ಮಹಾವತಾರ ಬಾಬಾಜಿಯವರ ಇರುವಿಕೆ ಮೊತ್ತಮೊದಲ ಬಾರಿಗೆ ಸಾರ್ವಜನಿಕರಿಗೆ ಈ ಪುಸ್ತಕದಿಂದ ತಿಳಿಯುವಂತಾಯಿತು. ಇವರ ಇಚ್ಛೆಯಂತೆ ಆಧ್ಯಾತ್ಮ ಪಿಪಾಸೆಯಿಂದ ಕೂಡಿದ ಪಾಶ್ಚಿಮಾತ್ಯರಿಗೆ ಯೋಗ ವಿದ್ಯೆಯನ್ನು ದಯಪಾಲಿಸಲು 1920 ರಲ್ಲಿ ಅಮೇರಿಕಕ್ಕೆ ಹೋಗಿ ಅಭೂತಪೂರ್ವ ಯಶಸ್ಸುಗಳಿಸಿದ ವಿವರವಿದೆ. 1935-36ರ ತಮ್ಮ ಭಾರತದ ಭೇಟಿಯ ವಿವರಗಳು ತುಂಬಾ ಸ್ಸ್ವಾರಸ್ಯಕರ. ತಮ್ಮ ಮಹಾಸಮಾಧಿಯಾಗುವ ಮೊದಲು 1946ರಲ್ಲಿ ಪ್ರಕಟಗೊಂಡ ಈ ಪುಸ್ತಕಕ್ಕೆ ನಂತರದ ಬೆಳವಣಿಗೆಗಳನ್ನು ಹೇಳುತ್ತಾ ಓದುಗರ ಅನೇಕ ಪ್ರಶ್ನೆಗಳಿಗೆ ಉತ್ತರವಾಗಿ ಯೋಗ ಮತ್ತು ಆಧ್ಯಾತ್ಮದ ಬಗ್ಗೆ ಇನ್ನಷ್ಟು ವಿವರಗಳನ್ನು ಒಂದು ಹೆಚ್ಚುವರಿ ಅಧ್ಯಾಯದಲ್ಲಿ ನೀಡಿದ್ದಾರೆ.

ಸುಲಲಿತವಾಗಿ ಓದಿಸಿಕೊಂಡು ಹೋಗುವ ಈ ಪುಸ್ತಕ ಧರ್ಮ ದೇಶ ಕಾಲಗಳನ್ನು ಮೀರಿ ಜನಪ್ರಿಯವಾಗಿರುವುದರ ಕಾರಣ ಇದು ಸತ್ಯವೂ ಶಿವವೂ ಸುಂದರವೂ ಆಗಿದೆ. ಎಲ್ಲರ ಮನೆ ಮನಗಳಲ್ಲೂ ಈ ಪುಸ್ತಕ ಬೆಳಗಲಿ ಎಂಬುದೇ ನನ್ನ ಆಶಯ.