"ಭೂಮಿಯ ಮೇಲಿನ ಪ್ರತಿಯೊಂದು ವಸ್ತುವೂ ಸಕ್ಕರೆ ಮರಳುಗಳ ಮಿಶ್ರಣವೇ. ಬುದ್ದಿಶಾಲಿಯಾದ ಇರುವೆಯಂತೆ ಸಕ್ಕರೆಯನ್ನು ಮಾತ್ರ ಗ್ರಹಿಸಿ ಮರಳು ಕಣಗಳನ್ನು ಬಿಟ್ಟುಬಿಡಬೇಕು." — ಮಹಾವತಾರ ಬಾಬಾಜಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Free Website Templates

Tuesday, January 26, 2010

ಬೇಂದ್ರೆ ನೆನಪು





ಪ್ರತಿ ಯುಗಾದಿಯಂದು ರೇಡಿಯೋ ಅಥವಾ ದೂರದರ್ಶನದಲ್ಲಿ ತಪ್ಪದೆ ಪ್ರಸಾರವಾಗುವ ಗೀತೆ ಬೇಂದ್ರೆಯವರ "ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ". ಒಂದು ರೀತಿಯಲ್ಲಿ ಬೇವು ಬೆಲ್ಲದಂತೆ ಈ ಗೀತೆಯೂ ಹಬ್ಬದ ಅವಿಭಾಜ್ಯ ಅಂಗವಾಗಿದೆ.

ಬೇಂದ್ರೆಯವರು ಈ ಪ್ರಸಿದ್ಧ ಗೀತೆಯಲ್ಲದೆ ಯುಗಾದಿಯ ಬಗ್ಗೆ ಇನ್ನೂ ಒಂದು ಗೀತೆಯನ್ನು ರಚಿಸಿದ್ದಾರೆ. ಅದರ ಮೊದಲ ಸಾಲುಗಳು ಇಂತಿವೆ:
ಅವರವರಿಗೆ ಅವರ ಹಾದಿ
ಅವರ ಹಾದಿ
ನನಗೆ ನಿನಗೆ ಒಂದೇ ಆದಿ
ಒಂದೇ ದಾದಿ
ಯುಗದ ಮಧ್ಯೆ ಬಿಂದು ಒಂದೂ
ಯುಗದ ಮಧ್ಯೆ ಬಿಂದು ಒಂದೂ
ಬೇಂದ್ರೆಯವರ ಇಂಥಹ ಸರಳವೆನಿಸುವ ಕವನಗಳಲ್ಲೇ ಜೀವನ ದರ್ಶನವಾಗುತ್ತದೆ. ಒಮ್ಮೆ ಬೇಂದ್ರೆಯವರ ಕಾವ್ಯದ ಬಗ್ಗೆ ಮಾತಾಡಲು ಬಂದವರಿಗೆ ವರಕವಿಯ ಕೆಲವು ಅಪರೂಪದ ಅಥವಾ ವಿಶಿಷ್ಟ ಕವನಗಳ ಬಗ್ಗೆ ಹೇಳಲು ಕೋರಲಾಯಿತು. ಅದಕ್ಕೆ ಉತ್ತರವಾಗಿ ಅವರು ಬೇಂದ್ರೆಯವರ ಪ್ರತಿ ಕವನವೂ ವಿಶಿಷ್ಟವೂ ಅಪರೂಪದ್ದೂ ಆದದ್ದು ಎಂದರು.
ಅವರ ವಿವಿಧ ಕವನಗಳ ಕೆಲವು ಸಾಲುಗಳು :
ಮೂಡಲ ಮನೆಯಾ ಮುತ್ತಿನ ನೀರಿನ ಎರಕಾವಾ ಹೊಯ್ದಾ
ನುಣ್ಣನೆ ಎರಕಾವಾ ಹೊಯ್ದಾ
ಬೆಳದಿಂಗ್ಳ ತು೦ಬಿತ್ತಾ ಅಂಗಳದ ತುಂಬಾ
ಅಂಗಳ ತುಂಬಿತ್ತಾ ಬೆಳದಿಂಗ್ಳಿನಿಂದಾ
ಇದರಾಗ ಅದು ಇತ್ತಾ , ಅದೆನೇ ಇದರೋಳಗಿತ್ತಾ
ಬೆಳದಿಂಗ್ಳ ತೊಂಬಿತ್ತಾ ಅಂಗಳದ ತುಂಬಾ
ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳೀಯಾಂವಾ
ವಾರದಾಗ ಮೂರು ಸರತಿ ಬಂದು ಹೊದಾ೦ವಾ
ಅವ್ವನ ಸೀರೆ ಮಾಡೀಚಲಾರೆ ಅಪ್ಪನ ರೊಕ್ಕಾ ಎಣೀಸಲಾರೆ
ಎಂತಾ ಪ್ರಕಾಶ ತುಂಬಿತು ಆಕಾಶಾ
ನನ ಕೈಯಾ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
ನಾನೂನು ನಕ್ಕೇನಾ ನಾನೂನು ನಕ್ಕೇನಾ
ಕುರುಡು ಕಾ೦ಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತು
ತುಂ ತುಂ ತುಂ ತುಂ
ತುಂ ತುಂ ತುಂ ತುಂ
ತುಂಬಿ ಬಂದಿತ್ತಾ
ತಂಗೀ ತುಂಬಿ ಬಂದಿತ್ತಾ
ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ
ಅವರ ಕವನಗಳನ್ನು ಸುಲಭವಾಗಿ ಹಾಡಬಹುದು. ಪಿ. ಕಾಳಿ೦ಗ ರಾವ್ , ಪಿ. ಬಿ. ಶ್ರೀನಿವಾಸ್ , ಯಶವ೦ತ ಹಳಬ೦ಡಿ, ಸ೦ಗೀತಾ ಕಟ್ಟಿ ಮು೦ತಾದವರು ಈ ಹಾಡುಗಳನ್ನು ಸುಮಧುರವಾಗಿ ಹಾಡಿ ಜನಪ್ರಿಯಗೊಳಿಸಿದ್ದಾರೆ. ಉತ್ತರ ಕರ್ಣಾಟಕದ ಜಾನಪದ ಶೈಲಿಯಲ್ಲಿ ಸ್ವತಃ ಬೇಂದ್ರೆಯವರೇ ಹಾಡಲು ಶುರು ಮಾಡಿದರೆ ಕೇಳುಗರು ಮಂತ್ರಮುಗ್ಧರಾಗುತ್ತಿದ್ದರ೦ತೆ.
ತಮ್ಮ ಕಾವ್ಯ ರಚನೆ , ಗಾಯನ , ಶಿಕ್ಷಣಗಳನ್ನು ಹೊರತುಪಡಿಸಿ ಅವರ ಆಸಕ್ತಿಗಳು ಹಲವಾರು. ಚೀನಿ ಭಾಷೆಯ ಕಲಿಕೆಯಿ೦ದ ಹಿಡಿದು ಸಂಖ್ಯಾರಹಸ್ಯ ಶಾಸ್ತ್ರದವರಗೆ. ಪದಗಳೊಡನೆ ಸರಸವನ್ನಾಡುತ್ತಾ ಕೇಳುಗರತ್ತ ಜ್ಞಾನ ಹಾಗೂ ಹಾಸ್ಯದ ಹೊಳೆಯನ್ನೇ ಹರಿಸುತ್ತಿದ್ದರು.
ಪದಗಳೊಡನೆ ಅವರ ಸರಸದ ಕೆಲವು ಮಾದರಿಗಳು :
ಇಳೆ ಮಳೆ ಬೇಕ೦ತದ , ಮಳೆ ಇಳೆ ಬೇಕಂತದ .
ಅವರ ಕವನದ ಶೀರ್ಷಿಕೆಯೊಂದು "ಬಾ ಹತ್ತರ" (ಹಿಂದಿಯಲ್ಲಿ ಎ೦ಬತ್ತೆರಡು ಎಂಬರ್ಥವೂ ಇದೆ )
ಬೆ೦ಗಳೂರಿನ ಬಳಿಯ Whitefield ಗೆ ಬ೦ದಾಗ ಸ್ಥಳದ ಹೆಸರನ್ನು ಕೇಳುತ್ತಲೇ "ಓ ಹೋ
"ಪಾಂಡುರ೦ಗ'" ಎ೦ದರು.
ಒಮ್ಮೆ ಎನ್ಕೆಯವರು ಬೇಂದ್ರೆಯವರನ್ನು ತಮ್ಮನ್ನು ತಮ್ಮ ಮನೆಯಿ೦ದ ಮಾರನೆಯ ದಿನ ಬೆಳಿಗ್ಗೆ ಏಳು ವರೆಗೆ ಬ೦ದು ಕರೆದೊಯ್ಯಲು ಕೇಳಿಕೊ೦ಡರು. ಆದರೆ ಆ ಸಮಯಕ್ಕೆ ಬ೦ದ ಬೇಂದ್ರೆಯವರಿಗೆ ಅವರಿನ್ನೂ ನಿದ್ರಿಸುತ್ತಿರುವುದಾಗಿ ತಿಳಿದುಬ೦ತು. ಒಡನೆಯೇ ತಮ್ಮ ಜೊತೆಯಲ್ಲಿದ್ದವರಿಗೆ "ನಮಗೆ ಏಳು ವರೆಗೆ ಬರಲಿಕ್ಕೆ ಹೇಳಿದ್ರು. ಈಗ ನಾವು ಅವ್ರು ಎಳೋವರೆಗೋ ಕಾಯಬೇಕು" ಎ೦ದರು.
ಒಮ್ಮೆ "ಪ್ರಪ೦ಚದಲ್ಲಿ ಮೊದಲು ಯಾವ ಭಾಷೆ ಹುಟ್ಟಿದ್ದು ?" ಎ೦ಬ ಪ್ರಶ್ನೆ ಬ೦ದಿತು. ಬೇ೦ದ್ರೆಯವರು ಒಮ್ಮೆಲೆ "ಕನ್ನಡ" ಎ೦ದರು. ಅದಕ್ಕೆ ವಿವರಣೆ ನೀಡುತ್ತಾ "ನಾವು ನೋಡುವುದು ಕಣ್ಣಿ೦ದ , ಕಣ್ಣೀರು ಹರಿಯುವುದು ಕೆನ್ನೆಯ ಮೇಲಿ೦ದ , ದುಡಿಯುವುದು ಕೈಯಿ೦ದ , ನಡೆಯುವುದು ಕಾಲಿ೦ದ ; ಎಲ್ಲ ಪದಗಳೂ ಕ ಎ೦ಬ ಅಕ್ಷರದಿಂದ ಮೊದಲಾಗುತ್ತದೆ, ಹೀಗಾಗಿ ಪ್ರಪ೦ಚದಲ್ಲಿ ಹುಟ್ಟಿದ ಮೊದಲ ಬಾಷೆ ಕನ್ನಡವೇ" ಎ೦ದರು.
ತಮ್ಮ ಸಮಯ ಸ್ಫೂರ್ತಿಯ ಮಾತುಗಳಿಂದ ಎಂತಹವರನ್ನೂ ಮೋಡಿ ಮಾಡುತ್ತಿದ್ದರು. ಧಾರವಾಡದಲ್ಲಿ ಅವರು ಕಟ್ಟಿಕೊಂಡ "ಗೆಳೆಯರ ಗು೦ಪಿ"ಗೆ ಅವರೇ ನಾಯಕರು. ಮನೆಯಲ್ಲಿ ಗೆಳೆಯರಿದ್ದರೆ ಮಾತಿನಲ್ಲಿ ಹೊತ್ತು ಹೋದದ್ದೇ ತಿಳಿಯುತ್ತಿರಲಿಲ್ಲ. ಆ ಸಂದರ್ಬಗಳಲ್ಲಿ ಅವರೊಂದಿಗಿರುತ್ತಿದ್ದ ಮಿತ್ರರ ಪ್ರಕಾರ ಅವರದು ಬತ್ತದ ಉತ್ಸಾಹ , ಕೊನೆಯಿಲ್ಲದ ಮಾತು. ಮಧ್ಯೆ ಆ ಪ್ರವಾಹಕ್ಕೆ ಯಾರೂ ಅಡ್ಡಿ ಬರಬಾರದು. ಅದೊಂದು ರೀತಿಯ ಏಕ ಮುಖ ಸಂಚಾರ ವ್ಯವಸ್ಥೆ. ಕೊನೆಗೆ ಸುಸ್ತಾಗಿ "ಸಾರ್ ನಿದ್ದೆ ಬರ್ತಾ ಇದೆ "ಎಂದರೆ "ಸರಿ , ನೀವು ಮಲಗಿ. ನಾನು ಸ್ವಲ್ಪ ಮಹಾರಾಜರ ಹತ್ತಿರ ಮಾತಾಡೋದಿದೆ" ಎನ್ನುವರು. ತಮ್ಮ ಆದ್ಯಾತ್ಮಿಕ ಗುರುಗಳೊಂದಿಗೆ ಅವರದು ಅಲೌಕಿಕವಾದ ಸಂಪರ್ಕ , ಸಂವಾದ. ಬೆಳಿಗ್ಗೆ ಎದ್ದು "ಏನ್ಸಾರ್ ಮಲಗಲಿಲ್ಲವೇ?"ಎಂದರೆ , "ಇಲ್ಲ , ಬೇಗ ಮುಖ ತೊಳೆದುಕೊಂಡು ಬಾ . ಮಹಾರಾಜರು ಏನೋ ಹೇಳ್ತಾ ಇದ್ದಾರೆ, ಬರ್ಕೋ " ಎನ್ನುವರು. ಅವರದು ಶ್ರಮ ಪಟ್ಟು ವ್ಯಾಸಂಗ ಮಾಡಿ ಬರೆದ ಕಾವ್ಯವಲ್ಲ. ತನ್ನಷ್ಟಕ್ಕೆ ತಾನೆ ಹುಕ್ಕಿ ಹರಿವ ಸ್ಫೂರ್ತಿಯ ಸೆಲೆ.
ಅವರ ಕಾವ್ಯದಲ್ಲಿ "ಕರಡಿಯ ಕುಣಿತ"ದಂತಹ ಶಿಶು ಗೀತೆಯಿಂದ "ಗಂಗಾವತರಣ" "ನಾಕು ತಂತಿ"ಯಂತಹ ವಿಮರ್ಶೆಗೂ ನಿಲುಕದ ಕವನಗಳಿವೆ. ಉಮರ್ ಖಯ್ಯಾಮನ ಕಾವ್ಯದಂತೆ ಅದು ಹಲವರಿಗೆ ಹಲವು ರೀತಿಯಲ್ಲಿ ತೋರಿದರೂ ಎಲ್ಲರೂ ಸವಿಯುವ ಕಾವ್ಯ ಅವರದಾಗಿತ್ತು. ವರಕವಿಯಾಗಿದ್ದರೂ ಎಲ್ಲರೊಡನೆ ಒಂದಾಗುವ
ವ್ಯಕ್ತಿತ್ವ ಅವರದು.
ಜ್ಞಾನಪೀಠ ಪ್ರಶಸ್ತಿ ಬಂದ ಹೊಸತರಲ್ಲಿ ಧಾರವಾಡದಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದಿಳಿದರು. ಎಂದಿನಂತೆ ಅವರನ್ನು ಬರಮಾಡಿಕೊಳ್ಳಲು ಅವರ ಕಿರಿಯ ಸ್ನೇಹಿತರೊಬ್ಬರು ಕಾದಿದ್ದರು. ಅದೇ ರೈಲಿನಲ್ಲಿ ಬಂದ ಆಗಿನ ಮುಖ್ಯ ಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯನವರು ಬೇಂದ್ರೆಯವರನ್ನು ನೋಡುತ್ತಲೇ "ನಮ್ಮಲ್ಲೇ ಉಳಿದುಕೊಳ್ಳಿ. ನೀವಿಲ್ಲಿರುವಷ್ಟು ಕಾಲ ಪ್ರತ್ಯೇಕ ಕೊಠಡಿ , ಕಾರು , ಚಾಲಕ ಎಲ್ಲವನ್ನು ಒದಗಿಸುತ್ತೇನೆ" ಎಂದರು. ಪೆಚ್ಚಾಗಿ ನಿಂತಿದ್ದ ತಮ್ಮ ಸ್ನೇಹಿತರನ್ನು ತೋರಿಸುತ್ತಾ "ಇ೦ವಾ ,'ಜ್ಞಾನಪೀಠ ಪ್ರಶಸ್ತಿ ಬಂದೊಡನೆ ಮುಖ್ಯ ಮಂತ್ರಿಯವರ ಜೊತೆಯಲ್ಲಿ ಹೋದರು' ಎನ್ನುವುದಿಲ್ಲವೇ" ಎನ್ನುತ್ತಾ ಅವರ ಆಮಂತ್ರಣವನ್ನು ನಯವಾಗಿ ನಿರಾಕರಿಸಿದರು. ಅವರೊಬ್ಬ ಸರಳ ಸಂಭಾವಿತ ಸ್ನೇಹಜೀವಿ. ಅವರ ಮಿತ್ರರ ಪ್ರಕಾರ ಅವರೊಬ್ಬ ಸ್ನೇಹಾವದೂತ.
ಬೇಂದ್ರೆ ಬದುಕಿನಲ್ಲಿ ಸಾಕಷ್ಟು ನೋವು ಅನುಭವಿಸಿದವರು. ಬದುಕಿನಲ್ಲಿ ಬೆಂದು ಬೇ೦ದ್ರೆಯಾದರು ಎನ್ನಲಾಗುತ್ತದೆ. ಬದುಕಿನಲ್ಲಿನ ಕತ್ತಲು ಮತ್ತು ಬೆಳಕನ್ನು ಮೀರಿ ಬೆಳೆದ ದಾರ್ಶನಿಕ ಕವಿ ಅವರಾಗಿದ್ದರು. ಸೂರ್ಯ ಮುಳುಗಿ ಕತ್ತಲಾಯಿತೆನ್ನುವವರಿಗೆ ಸ್ನೇಹಿತನಂತೆ ಪಕ್ಕದಲ್ಲಿ ಕುಳಿತು "ಬೆಳುದಿಂಗಳು ನೋಡಾ " ಎನ್ನುವರು. ಇಂತಹಾ ಜಗದ ಕವಿ , ಯುಗದ ಕವಿಯನ್ನು ಪಡೆದ ನಾವೇ ಭಾಗ್ಯಶಾಲಿಗಳು.
"ರಸವೇ ಜನನ ವಿರಸ ಮರಣ
ಸಮರಸವೇ ಜೀವನ "
-ಅಂಬಿಕಾತನಯ ದತ್ತ
(ದತ್ತಾತ್ರೇಯ ರಾಮಚಂದ್ರ ಬೇಂದ್ರೆ)

No comments:

Post a Comment